ಕನ್ನಡ ಪ್ರಭ : ಭಾರತದ ಅತ್ಯಂತ ದೊಡ್ಡ ಪತ್ರಿಕಾ ಸಮೂಹವನ್ನು ನಿರ್ವಹಿಸುತ್ತಿರುವ ಇಂಡಿಯನ್ ಎಕ್ಸ್‌ಪ್ರೆಸ್ ಸಂಸ್ಥೆಯ ಅಂಗವಾಗಿ 4 ನವೆಂಬರ್ 1967ರಂದು ಬೆಂಗಳೂರಿನಿಂದ ಆರಂಭವಾದ ಕನ್ನಡ ದಿನಪತ್ರಿಕೆ ಕನ್ನಡಪ್ರಭ. ಪ್ರಥಮ ಸಂಚಿಕೆಯಲ್ಲಿ ತನ್ನ ಧ್ಯೇಯೋದ್ದೇಶಗಳನ್ನು ಕುರಿತು ಪತ್ರಿಕೆ ಹೀಗೆಂದು ಹೇಳಿದೆ : ನಾವು ಯಾವ ಪಕ್ಷಕ್ಕೂ ಸೇರಿದವರಲ್ಲ. ಜನ ಸಾಮಾನ್ಯರ ಬದುಕನ್ನು ಹಸನುಗೊಳಿಸಲು ಪ್ರಯತ್ನಪಡುವ ಎಲ್ಲರೊಡನೆಯೂ ನಾವು ಸಹಕರಿಸುತ್ತೇವೆ. ಜನಸಾಮಾನ್ಯರ ಯೋಗಕ್ಷೇಮ ಪಾಲನೆಯಲ್ಲಿ ನಿರತರಾಗಿರುವವರೆಲ್ಲರ ಜತೆಯಲ್ಲೂ ಶ್ರಮಿಸುತ್ತೇವೆ. ಇದಕ್ಕಿಂತ ಹಿರಿದಾದ, ಶ್ರೇಯಸ್ಕರವಾದ ನಾಡ ಸೇವೆಯಿಲ್ಲ. ಇದೇ ಪ್ರಜಾಧರ್ಮ...... ಒಟ್ಟಿನ ಒಳಿತಿಗಾಗಿ ವ್ಯಕ್ತಿಯ ಹಿತವನ್ನಾಗಲಿ, ವ್ಯಕ್ತಿಯ ಹಿತಕ್ಕಾಗಿ ಒಟ್ಟಿನ ಒಳಿತನ್ನಾಗಲಿ ಕಡೆಗಾಣಲು ನಾವು ಒಪ್ಪೆವು. ಒಂದರಿಂದ ಮತ್ತೊಂದು ಸಾಧನೆಯಾಗಬೇಕು. ಒಂದು ಮತ್ತೊಂದಕ್ಕೆ ದಾರಿಯಾಗಬೇಕು. ಈ ಸಮಷ್ಟಿ ವೃಷ್ಟಿಗಳ ಸಮರಸವನ್ನು ಎತ್ತಿಹಿಡಿಯಲು ನಾವು ಉದ್ಯುಕ್ತರಾಗುತ್ತೇವೆ.......
ಇಂಗ್ಲಿಷ್ ಪತ್ರಿಕೆಯೊಂದನ್ನು ಪ್ರಕಟಿಸುವ ಸಂಸ್ಥೆಯೇ ಈ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರೂ ಇದು ಇಂಗ್ಲಿಷ್ ಪತ್ರಿಕೆಯ ಅನುಕರಣವಲ್ಲ. ಕನ್ನಡ ಜನತೆಯ ಪ್ರತಿನಿಧಿಯಾಗಿ ಸ್ವತಂತ್ರ್ಯ ಧೋರಣೆಗಳನ್ನುಳ್ಳ ಪತ್ರಿಕೆಯಿದು. ಪತ್ರಿಕೆಗಳ ಪ್ರಥಮ ಲಕ್ಷ್ಯವಾದ ಸುದ್ದಿ ವಿತರಣೆಯಲ್ಲಿ ಈ ಪತ್ರಿಕೆಗೆ ವ್ಯಾಪಕವಾದ ಸುದ್ದಿ ಮೂಲಗಳಿವೆ. ರಾಜ್ಯದ ಹಾಗೂ ದೇಶ ವಿದೇಶಗಳ ಸುದ್ದಿ ಸಂಗ್ರಹದಲ್ಲಿ ಮಾಮೂಲಿ ಸುದ್ದಿ ಸಂಗ್ರಹ ಸಂಸ್ಥೆಗಳ ಜೊತೆಗೆ, ಪ್ರಪಂಚದಾದ್ಯಂತ ವ್ಯಾಪಕವಾದ ಎಕ್ಸ್‌ಪ್ರೆಸ್ ನ್ಯೂಸ್ ಸರ್ವಿಸಿನ ವಿಶೇಷ ವ್ಯವಸ್ಥೆಯೂ ಈ ಪತ್ರಿಕೆಗಿದೆ. ಸುದ್ದಿ ಹಾಗೂ ಅಭಿಪ್ರಾಯ ಪ್ರಕಟಣೆಯಲ್ಲಿ ಸ್ವತಂತ್ರ ನಿಲವು ತಳೆದು ತನ್ನದೇ ಆದ ವಿಚಾರ ವೈಶಿಷ್ಟ್ಯವನ್ನು ಇದು ಕಾಪಾಡಿಕೊಂಡಿದೆ. ವಾಚಕೋಪಯುಕ್ತವಾದ ಹಲವು ವೈಶಿಷ್ಟ್ಯಪುರ್ಣ ಪ್ರಯೋಗಗಳನ್ನೂ ಕನ್ನಡ ಪ್ರಭ ನಡೆಸಿದೆ. ಓದುಗರಲ್ಲಿ ವಾಚನಾಭಿರುಚಿಯನ್ನು ಬೆಳೆಸುವ ಹಾಗೂ ಮನೋರಂಜನೆಯನ್ನು ಒದಗಿಸುವ ಸಲುವಾಗಿ ದೈನಿಕ ಧಾರಾವಾಹಿ ಕಾದಂಬರಿಯನ್ನು ಮೊತ್ತಮೊದಲು ಆರಂಭಿಸಿದ ಪತ್ರಿಕೆಯಿದು.

ದೈನಿಕ ಧಾರಾವಾಹಿಯನ್ನು ಪ್ರಕಟಿಸುವ ಏಕೈಕ ದಿನಪತ್ರಿಕೆ ಎಂಬ ಹೆಗ್ಗಳಿಕೆ ಇಂದಿಗೂ ಕನ್ನಡಪ್ರಭದ್ದೇ. ಸಿನಿಮಾ ಪುರವಣಿ, ಚಿತ್ರಪ್ರಭ, ವಾಣಿಜ್ಯ ಪುರವಣಿ, ವಿತ್ತಪ್ರಭ, ಮಹಿಳೆಯರಿಗಾಗಿ ಮಹಿಳಾಪ್ರಭ ಮೊದಲು ಆರಂಭಿಸಿದ್ದು ಕನ್ನಡಪ್ರಭ. ಮಹಿಳಾಪ್ರಭ ಈಗ ಪ್ರಕಟವಾಗುತ್ತಿಲ್ಲ ವಾದರೂ ಕ್ರೀಡಾ ಪ್ರಭ, ಜ್ಯೋತಿಷ್ಯಪ್ರಭ, ಕರ್ನಾಟಕ ಕನ್ನಡಿ, ಉದ್ಯೋಗ ಪ್ರಭ, ಕಾಲೇಜುರಂಗ ದಂಥ ವಿಶೇಷ ಪುಟಗಳು ಈಗಲೂ ಓದುಗರಿಗೆ ಜ್ಞಾನ, ರಂಜನೆ ಒದಗಿಸುತ್ತವೆ. ಚಿತ್ರಪ್ರಭ, ಸಾಪ್ತಾಹಿಕ ಪ್ರಭ, ಚಿತ್ರೋದ್ಯಮ ಹಾಗೂ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಪುರವಣಿಗಳು. ಕಥಾಸ್ಪರ್ಧೆಗಳನ್ನು ಏರ್ಪಡಿಸುವ ಮೊದಲ ಪತ್ರಿಕೆ ಕನ್ನಡಪ್ರಭವಲ್ಲವಾದರೂ ಅತಿ ಹೆಚ್ಚು ಮೊತ್ತದ (10,000ರೂ.ಗಳ) ಬಹುಮಾನ ನೀಡುವ ಮೊದಲ ಪತ್ರಿಕೆಯಾಯಿತು. ಇದಕ್ಕಿಂತಲೂ ಹೆಚ್ಚು ಮೊತ್ತದ ಬಹುಮಾನ ನೀಡುವ ಪತ್ರಿಕೆಗಳು ಇವೆ. ವರ್ಷದ ವ್ಯಕ್ತಿ-ಕನ್ನಡ ಪ್ರಭ ಅತ್ಯಂತ ಪ್ರತಿಷ್ಠಿತ ಆಯ್ಕೆ. 2005ರಿಂದ ಆರಂಭವಾದ ವರ್ಷದ ವ್ಯಕ್ತಿ ಒಂದು ಲಕ್ಷ ರೂಪಾಯಿ ಪ್ರಶಸ್ತಿ ಮೊತ್ತವನ್ನು ಹೊಂದಿದೆ.
ದೀಪಾವಳಿಗೋ ದೀಪಾವಳಿ ಸಂಚಿಕೆ, ಆರೋಗ್ಯ, ವಿದ್ಯಾಕುಸುಮ ವಿಶೇಷ ಸಂಚಿಕೆಗಳನ್ನು ಹೊರತರುತ್ತಿದೆ. 

ಸಂಪಾದಕೀಯ ವಿಭಾಗ ಸಂಪುರ್ಣ ಗಣಕೀಕರಣಗೊಂಡು ಆಧುನಿಕ ಪತ್ರಿಕೋದ್ಯಮದ ಜತೆಗೆ ಹೆಜ್ಜೆ ಹಾಕುತ್ತಿದೆ. ಬೆಂಗಳೂರು, ಬೆಳಗಾಂ, ಶಿವಮೊಗ್ಗ ಮತ್ತು ಮಂಗಳೂರು ಕೇಂದ್ರಗಳಿಂದ ಪತ್ರಿಕೆ ಪ್ರಕಟವಾಗುತ್ತಿದ್ದು, ಒಟ್ಟು 20 ಆವೃತ್ತಿಗಳನ್ನು ಹೊಂದಿದೆ. 
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪುರ್ಣಕಾಲಿಕ ವರದಿಗಾರರನ್ನೂ 200ಕ್ಕೂ ಹೆಚ್ಚು ಮಂದಿ ಅರೆಕಾಲಿಕ ವರದಿಗಾರರನ್ನೂ (ಗ್ರಾಮಾಂತರ ಮಟ್ಟದಲ್ಲಿ) ಹೊಂದಿದೆ.

ತಾಜಾ ಸುದ್ದಿಯನ್ನು ನೀಡುವುದರ ಜತೆಗೆ ಪುಟವಿನ್ಯಾಸಕ್ಕೂ ಹೆಚ್ಚು ಲಕ್ಷ್ಯ ಕೊಡುತ್ತಿದೆ. ರಾಜ್ಯದ ಸುದ್ದಿಗಳಿಗೆ ಮಹತ್ತ್ವ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸುದ್ದಿಗಳೂ ಅವುಗಳ ಮಹತ್ತ್ವಕ್ಕನುಗುಣವಾಗಿ (ಸ್ಥಳೀಯ ಓದುಗರ ದೃಷ್ಟಿಯಿಂದ) ಸ್ಥಾನ ಪಡೆಯುತ್ತವೆ.
ಪತ್ರಿಕೆಯ ಮೊದಲ ಸಂಪಾದಕರು ಎನ್.ಎಸ್. ಸೀತಾರಾಮ ಶಾಸ್ತ್ರೀ. ಅನಂತರ ಕೆ.ಎಸ್. ರಾಮಕೃಷ್ಣಮೂರ್ತಿ, ಖಾದ್ರಿ ಶಾಮಣ್ಣ, ವೈ.ಎನ್. ಕೃಷ್ಣಮೂರ್ತಿ, ಕೆ. ಸತ್ಯನಾರಾಯಣ, ವೆಂಕಟನಾರಾಯಣ ಪತ್ರಿಕೆಯ ಸಂಪಾದಕರಾಗಿದ್ದರು. ಈಗ ಎಚ್.ಆರ್. ರಂಗನಾಥ್ ಅವರ ಸಂಪಾದಕತ್ವದಲ್ಲಿ ಪತ್ರಿಕೆ ಹೊರಬರುತ್ತಿದೆ.	(ಕೆ.ಎಸ್.ಆರ್.ಎಂ.; ಜಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ